Thursday, 4 October 2018

ಸ್ಮಾರ್ಟ್‌ಸಿಟಿ: ತೈವಾನ್ ತಂತ್ರಜ್ಞಾನ ಪೂರಕ

ಸ್ಮಾರ್ಟ್‌ಸಿಟಿ: ತೈವಾನ್ ತಂತ್ರಜ್ಞಾನ ಪೂರಕ

ಸ್ಮಾರ್ಟ್ ಏಷ್ಯಾ ಏಕ್ಸ್‌ಪೋ ಸಮಿಟ್-೨೦೧೮ : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ 

ಬೆಂಗಳೂರು: ತುಮಕೂರು ಸೇರಿದಂತೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆಗೊಂಡಿರುವ ರಾಜ್ಯದ ೭ ನಗರಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಜನರಿಗೆ ಗುಣಮಟ್ಟದ ಜೀವನಶೈಲಿಯನ್ನು ಕಲ್ಪಿಸಿಕೊಡುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳು ಸ್ವಾವಲಂಬಿಗಳಾಗಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಸ್ಮಾರ್ಟ್ ಏಷ್ಯಾ-ಎಕ್ಸ್‌ಪೋ-೨೦೧೮ ಉದ್ಘಾಟಿಸಿ ಮಾತನಾಡಿದ ಅವರು ನಗರ ಪ್ರದೇಶದ ಜನರು ಎದುರಿಸುತ್ತಿರುವ ಸಾರಿಗೆ, ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆಯಂತಹ ಸಮಸ್ಯೆಗಳಿಗೆ ಸ್ಮಾರ್ಟ್‌ಸಿಟಿ ಪರಿಕಲ್ಪನೆ ಉತ್ತಮ ಪರಿಹಾರವಾಗಬೇಕಿದೆ ಎಂದರು.


ಸ್ಥಳೀಯ ಸಂಸ್ಥೆಗಳು ಸ್ವಯಂ ಅಭಿವೃದ್ಧಿ ದೃಷ್ಟಿಯಿಂದ ಸ್ವಾವಲಂಬಿಗಳಾಗುವುದರ ಜೊತೆಗೆ ನಾಗರಿಕರಿಗೆ ಉತ್ತಮ ಸಾರಿಗೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ತೈವಾನ್ ಸ್ಮಾರ್ಟ್‌ಸಿಟಿ ಪರಿಕಲ್ಪನೆ ಸಹಕಾರಿಯಾಗಲಿದ್ದು, ಸ್ಮಾರ್ಟ್ ಏಷ್ಯಾ ಎಕ್ಸ್‌ಪೋದಲ್ಲಿ ಪ್ರಸ್ತುತಪಡಿಸಲಿರುವ ತಂತ್ರಜ್ಞಾನ ಸ್ಮಾರ್ಟ್ ನಗರಗಳನ್ನು ರೂಪಿಸಲು ನೆರವಾಗಲಿದೆ, ರಾಜ್ಯ ಸರ್ಕಾರ ಕೂಡ ತೈವಾನ್ ಆಶಯಗಳೊಂದಿಗೆ ನಗರ ಅಭಿವೃದ್ಧಿಗೆ ಸಹಕಾರ ನೀಡಲು ಸಿದ್ಧವಿದೆ ಎಂದರು.
ತೈಪೆ ವರ್ಲ್ಡ್ ಟ್ರೇಡ್ ಸೆಂಟರ್‌ನ ಅಧ್ಯಕ್ಷ ಜೇಮ್ಸ್‌ಹಾಗ್ ಮಾತನಾಡಿ ಜನಸಂಖ್ಯೆ ಹೆಚ್ಚಳದಿಂದಾಗಿ ಸಮಸ್ಯೆ ಹೆಚ್ಚುತ್ತಿದ್ದು, ಜಾಗತೀಕರಣ ಇಂದು ಅಭಿವೃದ್ಧಿ ಸಾಧಿಸುವಂತಾಗಿದೆ. ಜನಸಂಖ್ಯೆ ಹೆಚ್ಚಳದೊಂದಿಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಸ್ಮಾರ್ಟ್ ಏಷ್ಯಾ ನೆರವಾಗಲಿದ್ದು, ಸ್ಮಾರ್ಟ್ ಜೀವನಕ್ಕೆ ನಾಂದಿಯಾಗಲಿದೆ ಎಂದರು.
ಜಾಗತೀಕರಣದಿಂದಾಗಿ ನಗರೀಕರಣ ವೇಗ ಪಡೆದುಕೊಳ್ಳುತ್ತಿದ್ದು,  ನಗರಗಳಲ್ಲಿ ಸುಗಮವಾಗಿ ಜೀವನ ನಡೆಸಲು ಸ್ಮಾರ್ಟ್‌ಸಿಟಿ ವಿಫುಲ ಅವಕಾಶ ಕಲ್ಪಿಸಲಿದೆ. ಸ್ಮಾರ್ಟ್ ಎಂದರೆ ಉತ್ತಮ ಸಾರಿಗೆ, ನೀರು, ತ್ಯಾಜ್ಯ ನಿರ್ವಹಣೆ ಹೀಗೆ ನಗರ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಮಾರ್ಟ್ ಏಷ್ಯಾದಂತಹ ಎಕ್ಸ್‌ಪೋ ಸಹಕಾರಿಯಾಗಲಿವೆ. ಸ್ಮಾರ್ಟ್ ಏಷ್ಯಾದ ಮೂಲಕ ಕೈಗಾರಿಕೆಗಳನ್ನು ಸ್ಥಾಪಿಸಿ, ಬಂಡವಾಳದೊಂದಿಗೆ ಉದ್ಯೋಗ ಸೃಷ್ಠಿಯನ್ನು ಮಾಡಲಾಗುತ್ತಿದ್ದು, ಇದರಿಂದ ಸ್ಮಾರ್ಟ್‌ಸಿಟಿಗಳ ಘನತೆ ಹೆಚ್ಚಳವಾಗಲಿದೆ. ೨೦೨೦ರೊಳಗೆ ೨೧ನೇ ಶತಮಾನದ ಅಂತ್ಯಕ್ಕೆ  ಭಾರತ ಮಾದರಿ ದೇಶವಾಗಲಿದೆ, ಅದರಲ್ಲೂ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಎಂದು ಶ್ಲಾಘಿಸಿದರು.
ರಾಜ್ಯ ಸರ್ಕಾರದ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಇಬ್ರಾಹಿಂ ಮಾತನಾಡಿ ನಮ್ಮ ನಗರಗಳು ಏಕೆ ಸ್ಮಾರ್ಟ್‌ಸಿಟಿಗಳಾಗುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ, ಸ್ಮಾರ್ಟ್‌ಸಿಟಿ ಅಂದರೆ ಜನರ ಸಹಭಾಗಿತ್ವ, ಖಾಸಗಿ ಸಹಭಾಗಿತ್ವ ಮಾತ್ರವಲ್ಲ ಇಂದು ಜಾಗತಿಕ ಸಹಭಾಗಿತ್ವ ಕೂಡ ಮುಖ್ಯ. ಜನರು ಬದಲಾವಣೆಗೊಳ್ಳುವ ಮೂಲಕ ಯೋಜನೆಯಲ್ಲಿ ಸಹಭಾಗಿತ್ವವನ್ನು ವಹಿಸಬೇಕಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಿಂದಾಗಿ ಅಂತರಾಷ್ಟ್ರೀಯ ಹೂಡಿಕೆ ಸಾಕಷ್ಟು ಅವಕಾಶ ಕಲ್ಪಿಸಿದ್ದು, ಸರ್ಕಾರ ಬಂಡವಾಳ ಹೂಡಿಕೆದಾರರಿಗೆ ಸಹಕಾರ ನೀಡಲಿದೆ. ಸ್ಮಾರ್ಟ್‌ಸಿಟಿ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಫ್‌ಐಸಿಸಿಐ ಅಧ್ಯಕ್ಷ ಶೇಖರ್ ವಿಶ್ವನಾಥನ್, ಬೆಂಗಳೂರು ವರ್ಲ್ಡ್ ಟ್ರೇಡ್ ಸೆಂಟರ್‌ನ ಅಧ್ಯಕ್ಷ ಬಾಲರಾಮ್ ಮೆನನ್ ಸೇರಿದಂತೆ ನೂರಕ್ಕು ಹೆಚ್ಚು ತೈವಾನ್ ಕಂಪನಿಗಳ ಪ್ರತಿನಿಧಿಗಳು, ಸ್ಥಳೀಯ ಉದ್ದಿಮೆದಾರರರು ಉಪಸ್ಥಿತರಿದ್ದರು.

No comments:

Post a Comment