ಜಮೀರ್ ರಾಜೀನಾಮೆಗೆ ಸೊಗಡು ಆಗ್ರಹ
ತುಮಕೂರು: ಬಿಜೆಪಿಗೆ ಮತ ನೀಡುವವರು ನಿಜವಾದ ಮುಸ್ಲೀಂರಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಆಹಾರ ನಾಗರೀಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಎಸ್.ಶಿವಣ್ಣ ಒತ್ತಾಯಿಸಿದ್ದಾರೆ.
ಸದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ನೀಡಿದರೆ ಅವರು ನಿಜವಾದ ಮುಸ್ಲಿಮರೇ ಅಲ್ಲ ಎಂಬ ಹೇಳಿಕೆ ನೀಡಿದ್ದು ಇದು ಖಂಡನೀಯ.ಸ್ವಾತಂತ್ರ್ಯ ನಂತರ ದಿಂದಲೂ ಭಾರತದಲ್ಲಿ ಹಿಂದೂ ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದು,ಜಮೀರ್‌ರಂತಹ ಕೆಲವರು ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.ನಮ್ಮ ದೇಶದಲ್ಲಿ ಕರ್ನಾಟಕ ಸಂಸ್ಕೃತಿ, ಸಂಸ್ಕಾರಕ್ಕೆ ಹೆಸರುವಾಸಿಯಾಗಿದ್ದು, ಸಹೋದರರಂತಿರುವ ಹಿಂದೂ ಮುಸ್ಲೀಂ ಬಾಂಧವರ ನಡುವೆ ಕಿಚ್ಚು ಹಚ್ಚಲು ಹೊರಟಿದ್ದಾರೆ.ಜಮೀರ್ ಅಹಮದ್ ನಮ್ಮ ಸಂತತಿಯವನಲ್ಲ, ಜಿನ್ನಾ ಸಂತತಿಯವನಿರಬೇಕು.ಆದ್ದರಿಂದಲೇ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವರು, ನಮ್ಮಲ್ಲಿರುವ ಡೋಂಗಿರಾಜಕಾರಣಿಗಳು, ಕಡಿಗೇಡಿಗಳು, ಮೀರ್‌ಸಾದಿಕ್‌ಗಳಿಂದ ದೇಶ ಒಡೆಯುವ ರೀತಿ ಹೇಳಿಕೆಗಳು ನೀಡುತ್ತಿರುವುದು ದುರದೃಷ್ಠಕರ.ಇಂತಹವರ ಮೇಲೆ ತಕ್ಷಣ ಕಾನೂನು ರೀತಿ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ನಮ್ಮ ದೇಶ ವಿಭಜನೆಯಾದಾಗ ಮುಸ್ಲೀಂ ಜನಸಂಖ್ಯೆ ೩ ಕೋಟಿ ಮಾತ್ರ. ಇಂದು ೨೦ ಕೋಟಿಯಷ್ಟು ಮಾತ್ರ.ಹಿಂದೂಗಳಿಗೆ ಇರುವ ಕುಟುಂಬ ನಿಯಂತ್ರನ ಅವರಿಗೆ ಏಕಿಲ್ಲ ಎಂದು ಪ್ರಶ್ನಿಸಿದ ಅವರು,ಎಲ್ಲರನ್ನೂ ಸಮಾನವಾಗಿ ಕಾಣುವ ಇಂತಹ ನಮ್ಮ ದೇಶವನ್ನು ಒಡೆಯುವ ಹುನ್ನಾರದಲ್ಲಿ ಮುಸ್ಲೀಂ ಬಾಂಧವರನ್ನು ಪ್ರೇರೇಪಿಸುವಂತಹ ಹೇಳಿಕೆ ನೀಡುತ್ತಿರುವ ಜಮೀರ್ ಅಹಮದ್ ವಿರುದ್ಧ ಸದನದಲ್ಲಿ ಪ್ರಸ್ತಾಪಿಸುವಂತೆ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಹಿಂದೂ ಸಂಸ್ಕೃತಿ ಉಳಿದಿರುವುದು ಕೇವಲ ಭಾರತದಲ್ಲಿ ಮಾತ್ರ.ಒಂದು ವೇಳೆ ಅದು ನಶಿಸಿದರೆ ಭಾರತೀಯ ಹಿಂದೂಗಳಿಗೆ ಉಳಿದಿರುವುದು ಬಂಗಾಳಕೊಲ್ಲಿ,ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರದಲ್ಲಿ ಮಾತ್ರ.ಆದ್ದರಿಂದ ಹಿಂದು ಸಂಸ್ಕೃತಿಗೆ ವಿರುದ್ದವಾಗಿ ಮಾತನಾಡುವ ಯಾರೇ ಆಗಲಿ ಅವರ ವಿರುದ್ದ ಶಿಸ್ತು ಕ್ರಮ ಜರುಗಬೇಕು ಎಂದು ಎಸ್.ಶಿವಣ್ಣ ಆಗ್ರಹಿಸಿದರು.
ಗೆದ್ದವರು ಮೂಲಭೂತ ಸೌಲಭ್ಯ ಕಲ್ಪಿಸಿ:ಮಹಾನಗರಪಾಲಿಕೆಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕೇವಲ ಶೇ.೫೯ ರಷ್ಟು ಮತದಾನವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಶಿವಣ್ಣ ಅವರು,ಚುನಾವಣೆಯಲ್ಲಿ ಅಭ್ಯರ್ಥಿಗಳು ಯಾರೇ ಗೆಲ್ಲಲಿ, ಗೆದ್ದವರು ನಗರದ ನಾಗರೀಕರ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ವಸತಿ ಸೌಲಭ್ಯ ಮತ್ತಿತರೆ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್,ಕೆ.ಪಿ.ಮಹೇಶ್,ಶಾಂತರಾಜು, ಬನಶಂಕರಿ ಬಾಬು, ಜಿ.ಕೆ.ಬಸವರಾಜು, ಕೆ.ಹರೀಶ್,ದಯಾನಂದ್, ಎಂ.ಎಚ್. ಚಂದ್ರಪ್ಪ, ಎನ್.ಗಣೇಶ್, ಕನ್ನಡ ಪ್ರಕಾಶ್ ಮೊದಲಾದವರು ಹಾಜರಿದ್ದರು.
No comments:
Post a Comment