ತುಮಕೂರು ಜಿಲ್ಲೆಯಲ್ಲಿ೪೦ ಚಿಕನ್ ಗುನ್ಯಾ ಪ್ರಕರಣ ದಾಖಲು
ಡಿಹೆಚ್‌ಓ ಡಾ.ಚಂದ್ರಿಕಾ.ಬಿ.ಆರ್. ಮಾಹಿತಿ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಜನವರಿ ೨೦೧೮ ರಿಂದ ದಿನಾಂಕ:೩೧-೮-೨೦೧೮ ರವರೆಗೆ ಒಟ್ಟು ೧೨೬೩ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ಇವುಗಳಲ್ಲಿ ಒಟ್ಟು ೬೪೩ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿ ೩೦ ಡೆಂಗ್ಯೂ ಮತ್ತು ೪೦ ಚಿಕನ್ ಗುನ್ಯಾ ಪ್ರಕರಣಗಳು ದೃಢಪಟ್ಟಿರುತ್ತದೆ ಎಂದು ಡಿಹೆಚ್‌ಓ ಡಾ: ಚಂದ್ರಿಕಾ ಬಿ.ಆರ್. ತಿಳಿಸಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಡೆಂಗ್ಯೂವಿನಿಂದ ಯಾವುದೇ ಸಂಶಯಾಸ್ಪದ ಅಥವಾ ದೃಢೀಕೃತ
ಡೆಂಗ್ಯೂವಿನಿಂದ ಮರಣ ಸಂಭವಿಸಿರುವುದಿಲ್ಲ. ಡೆಂಗಿ ಖಾಯಿಲೆಯು ಸೋಂಕು ಹೊಂದಿದ ಈಡೀಸ್ ಇಜಿಪ್ಟೈ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಖಾಯಿಲೆಯ ಮುಖ್ಯ ಲಕ್ಷಣಗಳು ಇದ್ದಕ್ಕಿಂದ್ದಂತೆ ತೀವ್ರ ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈ-ಕೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿಯಾಗುತ್ತದೆ. ತೀವ್ರ ಸ್ಥಿತಿಯಲ್ಲಿ ಮಾತ್ರ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದರು.
ಡೆಂಗಿ ಜ್ವರದ ಚಿಕಿತ್ಸೆಗೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ರೋಗ ನಿರೋಧಕ ಲಸಿಕೆ ಇರುವುದಿಲ್ಲ. ಡೆಂಗಿ ರೋಗದ ಲಕ್ಷಣಗಳು ಕಂಡುಬಂದಾಗ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಈ ರೋಗದ ನಿಯಂತ್ರಣಕ್ಕೆ ಈಡೀಸ್ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವುದೇ ಮುಖ್ಯ ವಿಧಾನವಾಗಿರುತ್ತದೆ ಎಂದು ಅವರು ಹೇಳಿದರು.
ಗೃಹಬಳಕೆ ಮತ್ತು ಮನೆ ಪರಿಸರದಲ್ಲಿ ನೀರು ಶೇಖರಣೆಗಳಾದ ತೊಟ್ಟಿ/ ಬ್ಯಾರಲ್‌ಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಬಿಸಾಡಿದ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗುವಂತಹ ಪ್ಲಾಸ್ಟಿಕ್ ವಸ್ತುಗಳು, ಟೈರುಗಳು, ಎಳನೀರಿನ ಚಿಪ್ಪು ಮುಂತಾದವುಗಳನ್ನು ತಕ್ಷಣ ವಿಲೇವಾರಿ ಮಾಡುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ಸೊಳ್ಳೆ ಕಚ್ಚುವಿಕೆಯಿಂದ ದೂರವಿರಲು ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನು ಬಳಸುವುದು ಸೂಕ್ತವಾಗಿರುತ್ತದೆ ಎಂದು ಅವರು ತಿಳಿಸಿದರು.
ಡೆಂಗ್ಯೂ ನಿಯಂತ್ರಣಕ್ಕಾಗಿ ಇಲಾಖೆಯಿಂದ ಲಾರ್ವಾ ಸಮೀಕ್ಷೆ ಮತ್ತು ಇತರೆ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಮನೆ ಹಾಗೂ ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟುವ ಮೂಲಕ ಡೆಂಗ್ಯೂ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತುಮಕೂರು ನಗರದಲ್ಲಿ ಕುರಿಪಾಳ್ಯ, ಹನುಮಂತಪುರ ಸೇರಿದಂತೆ ಏಳೆಂಟು ಪ್ರದೇಶಗಳನ್ನು ಡೆಂಗಿ/ಚಿಕುನ್‌ಗುನ್ಯಾ ಹರಡುವ ಪ್ರದೇಶಗಳೆಂದು ಗುರ್ತಿಸಿದ್ದು, ಆ ಪ್ರದೇಶಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ: ಮೋಹನ್‌ದಾಸ್ ಆರ್.ವಿ. ತುಮಕೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ: ಶರತ್‌ಚಂದ್ರ ಹಾಗೂ ಕೀಟತಜ್ಞೆ ಉಷಾ ಮತ್ತಿತರರು ಹಾಜರಿದ್ದರು.
No comments:
Post a Comment