ಪ್ರೊ. ಜಿಎಂಎಸ್ ಶೈಕ್ಷಣಿಕವಾಗಿ ಒಂದು ಅಕರ ಗ್ರಂಥ: ಕೆ.ದೊರೈರಾಜು
ತುಮಕೂರು: ಇಂದು ೮೫ನೇ ವಸಂತಕ್ಕೆ ಕಾಲಿಟ್ಟಿರುವ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ನನ್ನಂತಹ ಅನೇಕರಿಗೆ ಶೈಕ್ಷಣಿಕವಾಗಿ ಅವರೊಂದು ಅಕರ ಗ್ರಂಥ ಎಂದು ಹಿರಿಯ ಚಿಂತಕ ಕೆ.ದೊರೈರಾಜು ಅಭಿಪ್ರಾಯಪಟ್ಟಿದ್ದಾರೆ.ನಗರದ ಕನ್ನಡ ಭವನದಲ್ಲಿ ಹಿರಿಯ ಇತಿಹಾಸ ಉಪನ್ಯಾಸಕರು,ಚಿಂತಕರು ಆದ ಪ್ರೊ.ಜಿ.ಎಂ.ಎಸ್. ಅವರಿಗೆ ೮೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು ಹಮ್ಮಿಕೊಂಡಿದ್ದ ಪ್ರೊ.ಜಿ.ಎಂ.ಎಸ್.-೮೫ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು,ಸುಮಾರು ೩೫ ವರ್ಷಗಳ ಕಾಲ ಇತಿಹಾಸದ ಮೇಸ್ಟ್ರಾಗಿ ಕೆಲಸ ಮಾಡಿದ ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ.ನಾನು ಸೇರಿದಂತೆ ನನ್ನಂತಹ ಅನೇಕರಿಗೆ ನೇರವಾಗಿ ಬೋಧನೆ ಮಾಡದಿದ್ದರೂ,ವ್ಯಕ್ತಿತ್ವ,ನಡೆ,ನುಡಿ ಮೂಲಕ ಬದುಕಿನ ಪಾಠ ಹೇಳಿದವರು ಜಿ.ಎಂ.ಎಸ್,ತಾವು ನಂಬಿದ್ದ ಸಿದ್ದಾಂತ ದೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳದೆ, ಉತ್ತಮ ಶಿಕ್ಷಕರಾಗಿ, ದಕ್ಷ ಆಡಳಿತಗಾರರಾಗಿ, ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವ ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡವರು.ಅವರಲ್ಲಿರುವ ಜ್ಞಾನ, ಮಾನವೀಯ ಗುಣಗಳು ಮತ್ತು ವಿವೇಕ ನನ್ನ ಮತ್ತು ಅವರ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು.
ಪ್ರೊ.ಜಿ.ಎಂ.ಎಸ್.ಜೀವನ ಕುರಿತು ಹಿರಿಯ ಪತ್ರಕರ್ತ ಕೆ.ಈ.ಸಿದ್ದಯ್ಯ ಅವರು ಹೊರತಂದಿರುವ ತಿಳಿ ನೀರ ಹಾದಿಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರ ದಿನೇಶ ಅಮಿನ್‌ಮಟ್ಟು, ತುಮಕೂರು ನನ್ನ ಪಾಲಿಗೆ ತವರುಮನೆ ಇದ್ದಂತೆ, ಪ್ರೊ.ಜಿ.ಎಂ.ಎಸ್. ಹಾಗೂ ಕೆ.ದೊರೈರಾಜು ಅವರುಗಳು ನನ್ನ ಆತ್ಮಸಾಕ್ಷಿ ಎಂಬುದು ನನ್ನ ನಂಬಿಕೆ ಎಂದು ಬಣ್ಣಸಿದರು. ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರ ಜೀವನವನ್ನು ಸಿದ್ದಯ್ಯ ಈ ಸಣ್ಣ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಮುದ್ರಿಸಿದ್ದು,ಭಾರತ ಎಲ್ಲಾ ದೌರ್ಬಲ್ಯಗಳನ್ನು ಮೆಟ್ಟಿನಿಂತಿದೆ ಎಂದು ದೇಶವನ್ನು ವಿಶ್ವಗುರುವನ್ನಾಗಿಸಲು ಹೊರಟಿರುವ ಮನುವಾದಿಗಳ ಮುಖಕ್ಕೆ ಈ ಪುಸ್ತಕವನ್ನು ಹಿಡಿಯಬೇಕಿದೆ ಎಂದರು.
ಜಾತಿ ಹೆಸರಿನಲ್ಲಿ ಹೋರಾಟ ನಡೆಸುತ್ತಲೇ ಅತ್ಯಂತ ಜಾತಿವಾದಿಯಾಗಿ ರೂಪಗೊಳ್ಳುತ್ತೀರುವ ಹಲವರನ್ನು ನಾನು ಕಂಡಿದ್ದೇನೆ. ಆದರೆ ಎಂದಿಗೂ ತಮ್ಮ ಜಾತಿಯನ್ನು ಮುಂದಿಡದೆ, ವ್ಯಕ್ತಿತ್ವ ಮತ್ತು ತಾವು ನಂಬಿದ್ದ ಆದರ್ಶಗಳ ಮೂಲಕವೇ ಜಾತಿಯನ್ನು ಮೀರಿ ಬೆಳೆದು,ನಿಜ ಅರ್ಥದಲ್ಲಿ ವಿಶ್ವ ಮಾನವರಾದವರು ಪ್ರೊ.ಜಿ.ಎಂ.ಎಸ್ ಎಂದ ಅವರು, ನಾವು ನಕ್ಸಲ್‌ರ ಪ್ರತಿಪಾದಿಸುತ್ತಿರುವ ವಿಚಾರದ ಬಗ್ಗೆ ಸಹಮತವಿದ್ದರೂ, ಅದನ್ನು ಸಾಧಿಸಲು ತುಳಿಯುತ್ತಿರುವ ದಾರಿಯ ಬಗ್ಗೆ ವಿಶ್ವಾಸ ಹೊಂದಿಲ್ಲ.ನಕ್ಸಲ್ ಹಿಂಸೆಗಿಂತ ಜಾತಿ ಹಿಂಸೆಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ದಿನೇಶ್ ಅಮಿನ್ ಮಟ್ಟು ನುಡಿದರು.
ಕಾರ್ಯಕ್ರಮದಲ್ಲಿ ಪ್ರೊ.ರವಿವರ್ಮಕುಮಾರ್,ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್,ಲೇಖಕಿ ಮಲ್ಲಿಕಾ ಬಸವರಾಜು, ಶ್ರೀಮತಿ ಚೇತನ ಬಾಲಕೃಷ್ಣ,ಜಿಲ್ಲಾ ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ ಮತ್ತಿತರರು ವೇದಿಕೆಯಲ್ಲಿದ್ದರು.
೮೪ನೇ ವಸಂತ ಪೂರೈಸಿ, ೮೫ನೇ ವರ್ಷಕ್ಕೆ ಕಾಲಿಟ್ಟ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರನ್ನು ಅವರ ಒಡನಾಡಿಗಳು, ಶಿಷ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಭಿನಂದಿಸಿದರು.
No comments:
Post a Comment