ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಶಿಕ್ಷಣ ನೀತಿ ಜಾರಿ ಅಗತ್ಯ
ತುಮಕೂರು: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅತಿ ಹೆಚ್ಚು ಮಾನವ ಶಕ್ತಿಯನ್ನು ರೂಪಿಸಿ ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿರುವ ಹೆಗ್ಗಳಿಕೆ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬಿ.ಹೆಚ್. ರಸ್ತೆ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದ ಡಾ: ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿಂದು ಏರ್ಪಡಿಸಿದ್ದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೧ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಕ್ಕಳ ಭೌದ್ಧಿಕ ಮಟ್ಟಕ್ಕೆ ತಕ್ಕಂತೆ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವಂತಹ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಲ್ಲಿ ಮತ್ತಷ್ಟು ಸದೃಢ ರಾಷ್ಟ್ರ ನಮ್ಮದಾಗಲಿದೆ ಎಂದರು.
ಸಮಾಜವನ್ನು ತಿದ್ದಿ ತೀಡುವಂತಹ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವಂತಹ ಶಿಕ್ಷಕರ ಬಗ್ಗೆ ಪ್ರಶಂಸನಾ ಮಾತುಗಳನ್ನಾಡುವ ದಿನವಿದು.ಇದಕ್ಕೆ ಕಾರಣ ಕರ್ತರಾದ ಡಾ:ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವಾದ ಸೆ.೫ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿಯು ಆಧುನಿಕ ಜಗತ್ತಿನಲ್ಲಿ ಶಾಲಾ-ಕಾಲೇಜುಗಳಾಗಿ ಬದಲಾಗಿವೆ.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸತ್ಪ್ರಜೆಯನ್ನಾಗಿ ಮಾಡುವ,ಧರ್ಮ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ.ಗುರುಗಳ ಸ್ಥಾನ ಎಲ್ಲಾ ಕ್ಷೇತ್ರಗಳಿಗೂ ಮಿಗಿಲಾದುದು.ಸಮಾಜವನ್ನು ಬದಲಾಯಿಸುವ ಶಕ್ತಿ ಅವರಿಗಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಪ್ರತಿ ವರ್ಷ ಲಕ್ಷಾಂತರ ಮಂದಿ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು ಹೊರಬರುತ್ತಿದ್ದಾರೆ.ಅಮೆರಿಕಾ ಸೇರಿ ಯಾವುದೇ ಮುಂದುವರೆದ ರಾಷ್ಟ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಶಕ್ತಿಯನ್ನು ಹುಟ್ಟುಹಾಕಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ ನಮ್ಮ ದೇಶವು ಪ್ರಪಂಚದಲ್ಲೆಯೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ವೈದ್ಯರು, ಇಂಜಿನಿಯರ್‌ಗಳು, ಆಡಳಿತಗಾರರನ್ನು ರೂಪಿಸುವಲ್ಲಿ ಮೊದಲಸ್ಥಾನ ಗಳಿಸಿದೆ ಎಂದರಲ್ಲದೆ ಡಾ: ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ ದೊರೆಯಬೇಕು.ರಾಜ್ಯ ಸರಕಾರವೂ ಕೂಡ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಮೇಲೆ ಹೆಚ್ಚಿನ ಅನುದಾನವನ್ನು ವೆಚ್ಚ ಮಾಡುತ್ತಿದೆ.ನಮ್ಮ ಶಾಲೆಗಳು ಇನ್ನಷ್ಟು ಸದೃಢವಾಗಲು ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ನಂತರ ಡಾ:ಜಿ.ಪರಮೇಶ್ವರ್ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಹೆಸರಿನಲ್ಲಿ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ತಲಾ ಒಬ್ಬ ಉತ್ತಮ ಮಹಿಳಾ ಶಿಕ್ಷಕಿಗೆ ೨೫,೦೦೦ ರೂ.ಗಳ ನಗದು ಪುರಸ್ಕಾರವನ್ನು ನೀಡುವುದಾಗಿ ಘೋಷಿಸಿದರು.
ಕುಣಿಗಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ: ಗೋವಿಂದರಾಯ ಅವರು ನೀಡಿದ ಉಪನ್ಯಾಸದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ತಂದೆ-ತಾಯಿಯಂತೆ ಕಾಣಬೇಕು. ಇಂದಿನ ಮಕ್ಕಳು ಹಿರಿಯ ಮಾತು ಕೇಳುತ್ತಿಲ್ಲವೆಂಬ ತಳಮಳದ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಗುರು ಹಾಗೂ ಗುರಿಯನ್ನು ಹೊಂದಿರಬೇಕು. ಅದೇ ರೀತಿ ಶಿಕ್ಷಕರೂ ಕೂಡ ಸೇವಾ ಮನೋಭಾವ, ಆತ್ಮತೃಪ್ತಿ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಮಕ್ಕಳಿಗೆ ಗುಣಮಟ್ಟದ ಬೋಧನೆ ನೀಡಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿ ಮಾತನಾಡಿ, ಶಿಕ್ಷಕರು ತಮ್ಮಲ್ಲಿರುವ ಮಾದರಿ ಗುಣಗಳಿಂದ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ ಅವರು ಶಿಕ್ಷಕರಿಗೆ ಲಿಖಿತ ಸಂದೇಶ ಕಳುಹಿಸುವ ಮೂಲಕ ಶಿಕ್ಷಕರ ದಿನಾಚರಣೆ ಶುಭಾಷಯ ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ದಕ್ಷಿಣ ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಲಾ ೬ ರಂತೆ ಒಟ್ಟು ೧೮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತಲ್ಲದೆ ೨೦೧೭ರ ಸೆ.೧ ರಿಂದ ೨೦೧೮ರ ಆಗಸ್ಟ್ ೩೧ರವರೆಗೆ ನಿವೃತ್ತಿ ಹೊಂದಿದ ತುಮಕೂರು ತಾಲ್ಲೂಕಿನ ೧೩೪ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿದರು, ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಗೋವಿಂದರಾಜು ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ:
ಕಳೆದ ಏಪ್ರಿಲ್ ೨೦೧೮ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದ ಚಿಕ್ಕನಾಯಕನಹಳ್ಳಿಯ ಆರ್. ಚಿನ್ಮಯಿ ಹಾಗೂ ಮುಬಾರಕ್ ಅಗಾ, ತಿಪಟೂರಿನ ಎಸ್. ಚಿನ್ಮಯಿ,ತುಮಕೂರು ತಾಲೂಕಿನಲ್ಲಿ ಗರಿಷ್ಟ ಅಂಕ ಪಡೆದ ನಿಹಾ ಅಜ್‌ಮತ್, ಹೆಚ್.ಎಲ್. ನಿಶಾ ಹಾಗೂ ವಿನುತಾ ಅವರಿಗೂ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವಿಧಾನಪರಿಷತ್ ಸದಸ್ಯ ಎಂ.ಕಾಂತರಾಜ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಗೋಪಿನಾಥ್, ತುಮಕೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ತುಮಕೂರು ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಕರು, ವಿವಿಧ ಅಧಿಕಾರಿಗಳು ಹಾಜರಿದ್ದರು.
No comments:
Post a Comment