Saturday, 8 September 2018

ಗ್ರಾಹಕರ ಹಿತಕಾಪಾಡಿ: ಎಸ್.ಎಸ್.ಪುಟ್ಟಣಶೆಟ್ಟಿ

ಗ್ರಾಹಕರ ಹಿತಕಾಪಾಡಿ: ಎಸ್.ಎಸ್.ಪುಟ್ಟಣಶೆಟ್ಟಿ

ತುಮಕೂರು: ಗುಣಮಟ್ಟದ ಸೇವೆ ಒದಗಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಹಕರು ಹಿತ ಕಾಪಾಡುವುದು ಪ್ರಮುಖ ಕರ್ತವ್ಯಗಳಲ್ಲಿ ಒಂದು ಎಂದು ಕರ್ನಾಟಕ ವಿದ್ಯುತ್‌ಚಕ್ತಿ ನಿಯಂತ್ರಣ ಆಯೋಗ ಮತ್ತು ವಿದ್ಯುತ್ ಲೋಕಾಯುಕ್ತರಾದ ಎಸ್.ಎಸ್.ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ನಗರದ ಎಸ್.ಐ.ಟಿಯ ಬಿರ್ಲಾ ಅಡಿಟೋರಿಯಂನಲ್ಲಿ ಬೆಸ್ಕಾಂ ವತಿಯಿಂದ ಕರ್ನಾಟಕ ವಿದ್ಯುತ್‌ಚಕ್ತಿ ನಿಯಂತ್ರಣ ಆಯೋಗ ಹಾಗೂ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ ಆಯೋಜಿಸಿದ್ದ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡುವಾಗ ಹಾಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲಿಸುವುದರ ಜೊತೆ, ಜೊತೆಯಲ್ಲಿಯೇ, ನಿಗಧಿತ ಅವಧಿಯೊಳಗೆ ಗ್ರಾಹಕರ ದೂರು, ದುಮ್ಮಾನಗಳನ್ನು ನಿವಾರಿಸುವ ಮೂಲಕ ಗ್ರಾಹಕರಿಗೆ ಅನಗತ್ಯ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.



ಗ್ರಾಹಕರು ವಿದ್ಯುತ್ ಸರಬರಾಜು ಇನ್ನಿತರ ಸಮಸ್ಯೆಗಳ ಕುರಿತು ನೀಡುವ ದೂರುಗಳು ನಿಗಧಿತ ಸಮಯದಲ್ಲಿ ಪರಿಹಾರ ಕಾಣಬೇಕು ಎಂಬ ಉದ್ದೇಶದಿಂದ ಕರ್ನಾಟಕ ವಿದ್ಯುತ್‌ಚಕ್ತಿ ಕಾಯ್ದೆ-೨೦೦೩ರ ಅಡಿಯಲ್ಲಿ ಕರ್ನಾಟಕ ವಿದ್ಯುತ್‌ಚಕ್ತಿ ಆಯೋಗವನ್ನು ರಚಿಸಿ,ವಿದ್ಯುತ್ ಲೋಕಪಾಲಕರನ್ನು ನೇಮಕ ಮಾಡಿದೆ.ಪ್ರತಿ ಜಿಲ್ಲಾ ಮಟ್ಟದಲ್ಲಿ ಮೂರು ಜನರನ್ನು ಒಳಗೊಂಡ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯನ್ನು ತೆರೆದಿದ್ದು,ಇದು ಬಹಳಷ್ಟು ಗ್ರಾಹಕರಿಗೆ ತಿಳಿದಿಲ್ಲ. ಒಂಬಡ್ಸಮನ್‌ಗೆ ಇದುವರೆಗೂ ಬಂದಿರುವ ೭೦ಕೇಸುಗಳಲ್ಲಿ ೬೪ ದೂರುಗಳು ಬೆಂಗಳೂರು ನಗರಕ್ಕೆ ಸೇರಿವೆ. ಈ ನಿಟ್ಟಿನಲ್ಲಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಗ್ರಾಹಕರಿಂದ ಬರುವ ದೂರುಗಳ ಸ್ವೀಕಾರಕ್ಕೆ ಇಂಧನ ಇಲಾಖೆಯ ೧೯೧೨ರ ನಂಬರ್‌ನ ಸಹಾಯವಾಣಿ ತೆರೆದಿದೆ.ಇದಕ್ಕೆ ವರುವ ದೂರುಗಳನ್ನು ಸ್ವೀಕರಿಸಿ,ಅಧಿಕಾರಿಗಳು ಮತ್ತು ದೂರು ನೀಡಿದ ಗ್ರಾಹಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ೬೦ ದಿನಗಳ ಒಳಗೆ ಇತ್ಯರ್ಥ್ಯಗೊಳಿಸಬೇಕು.ಒಂದು ವೇಳೆ ವೇದಿಕೆ ನೀಡಿದ ತೀರ್ಪು ತೃಪ್ತಿಯಾಗದಿದ್ದಲ್ಲ್ಲಿ,ವಿದ್ಯುತ್ ಲೋಕ ಪಾಲಕರು(ಓಂಬಡ್ಸಮನ್) ಅವರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.ಅವರು ಸಹ ಮೇಲ್ಮನವಿಯನ್ನು ಮುಂದಿನ ೬೦ ದಿನಗಳಲ್ಲಿ ಇತ್ಯರ್ಥಗೊಳಿಸಬೇಕು.ಒಂದು ವೇಳೆ ಓಂಬಡ್ಸಮನ್ ನೀಡುವ ತೀರ್ಪು ತೃಪ್ತಿ ತರದಿದ್ದಲ್ಲಿ,ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.ಈ ರೀತಿಯ ವ್ಯವಸ್ಥೆಯನ್ನು ಪಾಲಿಸದೆ ಗ್ರಾಹಕರ ವಿದ್ಯುತ್ ದೂರುಗಳನ್ನು ನೇರವಾಗಿ ಹೈಕೋರ್ಟಿನಲ್ಲಿ ಸಲ್ಲಿಸಿದರೆ ನ್ಯಾಯಾಲಯ ತಿರಸ್ಕರಿಸಲಿದೆ.ಆದ್ದರಿಂದ ಗ್ರಾಹಕರು ತಮ್ಮ ದೂರುಗಳನ್ನು ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳುವಂತೆ ಎಸ್.ಎಸ್.ಪುಟ್ಟಣಶೆಟ್ಟಿ ಸಲಹೆ ನೀಡಿದರು.
ಪ್ರಸ್ತುತ ಇಂದಿನ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯಲ್ಲಿ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಗ್ರಾಹಕರು ಮತ್ತು ಅಧಿಕಾರಿಗಳು ಮಾತ್ರ ಭಾಗವಹಿಸಲು ಅವಕಾಶವಿದೆ.ಕರ್ನಾಟಕ ವಿದ್ಯುತ್‌ಚಕ್ತಿ ಆಯೋಗ-೨೦೦೪ರ ಅಡಿಯಲ್ಲಿ ಬರುವ ಕಲಂ ೧೨೬ ವಿದ್ಯುತ್ ದುರುಪಯೋಗ, ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದ ಕಲಂ ೧೩೫ರಿಂದ ೧೩೯ ಹಾಗೂ ಪ್ರಾಣ ಹಾನಿಗೆ ಸಂಬಂದಿಸಿದಂತೆ ಕಲಂ ೧೬೧ನ್ನು ಹೊರತು ಪಡಿಸಿ, ಉಳಿದಲ್ಲಾ ಎಲ್ಲಾ ದೂರುಗಳನ್ನು ಗ್ರಾಹಕರು ಕುಂದುಕೊರತೆ ನಿವಾರಣಾ ವೇದಿಕೆಗೆ ಸಲ್ಲಿಸಬಹುದಾಗಿದೆ.ಕಾಲಮಿತಿಯೊಳಗೆ ಗ್ರಾಹಕರು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಇಲಾಖೆಯಿಂದ ಗ್ರಾಹಕರು ತ್ವರಿತವಾಗಿ ವಿದ್ಯುತ್ ಸಂಪರ್ಕ ಒದಗಿಸುವ ಉದ್ದೇಶದಿಂದ ಪಾಸ್ಟ್‌ಟ್ರಾಕ್ ನ್ಯೂ ಕನಕ್ಷನ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ೭.೫ಕೆ.ವಿ. ವರೆಗೆ ಗ್ರಾಹಕ ಅರ್ಜಿ ಸಲ್ಲಿಸಿದ ೨೪ ಗಂಟೆಯೊಳಗೆ ಸಂಪರ್ಕ ನೀಡುವ ವ್ಯವಸ್ಥೆ ಇದೆ.ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ೧೦ ಪ್ರತ್ಯೇಕ ಪೀಡರ್ ಮಾಡಿದ್ದು, ಕೈಗಾರಿಕಾ ವಲಯಕ್ಕಾಗಿಯೇ ಒಂದು ದೂರು ವಿಭಾಗ ತೆರೆದಿದ್ದು, ದಿನದ ೨೪ ಗಂಟೆ ಕೆಲಸ ಮಾಡಲಿದೆ.ಅಲ್ಲದೆ ಕೈಗಾರಿಕಾ ವಲಯಕ್ಕಾಗಿಯೇ ಪ್ರತ್ಯೇಕ ೨೨೦ ಕೆ.ವಿ. ಸ್ಥಾವರ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಬೆಸ್ಕಾಂ
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಟಿ.ಸಿ.ಗಳ ದುರಸ್ತಿ,ದೂರುಗಳ ಪರಿಹಾರ ಎಲ್ಲವೂ ಶೀಘ್ರವಾಗಿ ನಡೆಯುತ್ತಿದೆ.ವಿದ್ಯುತ್ ಸಾಮಗ್ರಿಗಳ ಖರೀದಿಗೂ ಮುನ್ನ ಅವುಗಳ ಗುಣಮಟ್ಟ ಖಾತರಿ ಪಡಿಸಿಕೊಂಡರೆ ಮತ್ತಷ್ಟು ಉತ್ತಮ ಸೇವೆ ನೀಡಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂಗೆ ಸೇರಿದ ಚಿತ್ರದುರ್ಗ ಮುಖ್ಯ ಇಂಜಿನಿಯರ್ ಗುರುಮೂರ್ತಿ, ಲೆಕ್ಕ ನಿಯಂತ್ರಣಾಧಿಕಾರಿ ಭೀಮಪ್ಪ ಚಿಣಗಿ, ದಾವಣಗೆರೆ ಜಿಲ್ಲೆಯ ಅಧೀಕ್ಷಕ ಇಂಜಿನಿಯರ್ ಸುಭಾಷ್ ಚಂದ್ರ, ತುಮಕೂರು ಅಧೀಕ್ಷಕ ಇಂಜಿನಿಯರ್ ನಾಗೇಂದ್ರ,ಚಿತ್ರದುರ್ಗ ಅಧೀಕ್ಷಕ ಇಂಜಿನಿಯರ್ ಶ್ರೀನಿವಾಸ್,ಬೆಸ್ಕಾಂ ಸಿ.ಆರ್.ವಿಭಾಗದ ಜಿ.ಎಂ.ಸಿ.ಆರ್.ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಜಯಂತಿ, ಸಿ.ಎ.ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಮಾಲಿನಿ,ಸಲಹಾ ಸಮಿತಿ ಸದಸ್ಯರಾದ ಪ್ರಭಾಕರ್,ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಉಪಾಧ್ಯಕ್ಷ ಜಿ.ವಿ.ರಾಮಮೂರ್ತಿ,ಮೂರು ಜಿಲ್ಲೆಗಳ ಹಿರಿಯ ಅಧಿಕಾರಿಗಳು ಮತ್ತು ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment

vishalaprabha 09-02-2019 pages