ಆರೋಗ್ಯದ ಹಿಡಿತಕ್ಕೆ ಯೋಗವೇ ಮದ್ದು: ಪ್ರೊ.ವೈ.ಎಸ್.ಸಿದ್ದೇಗೌಡ
ನಗರದ ಹನುಮಂತಪುರದಲ್ಲಿರುವ ಶ್ರೀ ಪತಂಜಲಿ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗ ಜೀವನ ದರ್ಶನ-೨೦೧೮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯಿರುವ ಭಾರತೀಯ ಸಂಸ್ಕೃತಿಯಲ್ಲಿ ಯೋಗವಿದ್ಯೆ ಅಥವಾ ಯೋಗಕಲೆ ವಿಶಿಷ್ಟವಾದುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದೇ ದೃಷ್ಟಿಯಿಂದ ಇಂದು ಇಡೀ ವಿಶ್ವವೇ ಭಾರತದ ಯೋಗವಿದ್ಯೆಯತ್ತ ಗಮನಹರಿಸುತ್ತಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪರಮೇಶ್ ಮಾತನಾಡಿ ಆಧುನಿಕ ಜೀವನದ ಮಿತಿಮೀರಿದ ಒತ್ತಡಗಳು ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಗೆ ಕಾರಣವಾಗಿ ಜೀವನವನ್ನು ಹಿಂಡಿಹಿಪ್ಪೆ ಮಾಡುತ್ತಿವೆ. ಇಂತಹ ಒತ್ತಡಗಳ ಸಂದರ್ಭದಿಂದ ಪಾರಾಗಿ ನೆಮ್ಮದಿಯ ಜೀವನ ನಡೆಸಲು ಯೋಗವೊಂದು ಆಶಾಕಿರಣ ಮತ್ತು ವರದಾನವೇ ಸರಿ. ಯುವಜನರು ಯೋಗಾಭ್ಯಾಸಕ್ಕೆ ಒತ್ತು ಕೊಡಬೇಕು. ಯೋಗಭ್ಯಾಸ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳ್ಳದೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಪ್ರೊ.ಹೆಚ್.ಚಂದ್ರಣ್ಣ ಮಾತನಾಡಿ ಆರೋಗ್ಯ ಸಂಪತ್ತನ್ನು ಹೊಂದಲು ಯೋಗಭ್ಯಾಸ ಒಂದು ವರದಾನ. ಜಗತ್ತಿನ ನೂರಾರು ರಾಷ್ಟ್ರಗಳಿಂದು ಯೋಗವಿದ್ಯೆಗೆ ಮಾರುಹೋಗಿವೆ. ಇಂದು ಇಡೀ ಜಗತ್ತಿನ ಗಮನಸೆಳೆದಿರುವ ಯೋಗವಿದ್ಯೆಯಿಂದ ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿದೆ. ಯೋಗದಿಂದ ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಮಾತ್ರವಲ್ಲದೆ ಏಕಾಗ್ರತೆಯನ್ನು ಸಾಧಿಸಲು ಅವಕಾಶವಿದೆ ಎಂದು ತಿಳಿಸಿದರು.
ಸಾವಿರಾರು ವರ್ಷಗಳ ಹಿಂದೆಯೇ ಋಷಿಮುನಿಗಳು ಯೋಗವಿದ್ಯೆಗೆ ನಾಂದಿಹಾಡಿದ್ದು, ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಯೋಗಕಲೆ ಇಂದು ವಿಶ್ವದಾದ್ಯಂತ ಪಸರಿಸುತ್ತಿದೆ. ಅಮೆರಿಕ ಸೇರಿದಂತೆ ಹಲವು ಮುಂದುವರಿದ ದೇಶಗಳು ಮಾತ್ರವಲ್ಲ ಜಗತ್ತಿನ ಎಲ್ಲ ದೇಶಗಳು ಯೋಗವನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿವೆ ಎಂದರು.
ಈ ಸಂದರ್ಭದಲ್ಲಿ ಯೋಗ ಸಮಿತಿಯಪ್ರೊ.ಡಿ.ಚಂದ್ರಣ್ಣ, ಡಾ.ಪರಮೇಶ್, ಗಿರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
No comments:
Post a Comment