ಜಿಲ್ಲೆಯನ್ನು ಬರಪಿಡೀತವೆಂದು ಘೋಷಿಸಲು ಬಿಜೆಪಿ ರೈತಮೋರ್ಚಾ ಒತ್ತಾಯ
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜಿಲ್ಲೆಯಲ್ಲಿ ಶೇ.೫೪.೩೨ ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯ ಅಭಾವದಿಂದ ಶೇ.೪೬.೬೮ರಷ್ಟು ಬಿತ್ತನೆ ಕಡಿಮೆಯಾಗಿದೆ.ಈಗಾಗಲೇ ಗುಬ್ಬಿ, ಶಿರಾ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಬಿತ್ತನೆಯಾಗಿರುವ ಭತ್ತದ ಪೈರು ಸಂಪೂರ್ಣ ಒಣಗಿ ಹೋಗಿದೆ ಎಂದರು.
ಇನ್ನು ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ೧,೩೧,೩೨೯ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತಾದರೂ ಕೇವಲ ೪೨,೬೪೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.ಬಿತ್ತನೆಯಾಗಿರುವ ಶೇಂಗಾ ಕೂಡಾ ಮಳೆಯ ಕೊರೆತೆ ಮತ್ತು ರೋಗಬಾಧೆಯಿಂದ ಶೇ.೬೦ ರಷ್ಟು ಬೆಳೆ ನಾಶವಾಗಿದೆ ಎಂದ ಅವರು,೨,೨೫,೭೦೯ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ೧,೫೫,೧೬೭ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತನೆಯಾಗಿದ್ದು, ಬಿತ್ತನೆಯಾಗಿರುವ ರಾಗಿಯೂ ಕೂಡಾ ಮಳೆ ಹಾಗೂ ನೀರಿನ ಅಭಾವದಿಂದ ಶೇ.೭೦ ರಷ್ಟು ಪೈರು ಒಣಗಿಹೋಗಿದೆ. ಇದರಿಂದ ರೈತರ ಆತಂಕ ಹೆಚ್ಚಿದ್ದು, ಜಿಲ್ಲಾಡಳಿತ ಮತ್ತು ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
ರೈತರು ಮಾಡಿರುವ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದು, ಮುಖ್ಯಮಂತ್ರಿಗಳು ಸಾಲಮನ್ನಾ ಮಾಡಿದ್ದೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ಯಾವ ರೈತನಿಗೂ ಋಣಮುಕ್ತ ಪತ್ರ ನೀಡಿಲ್ಲ, ರೈತರಿಗೆ ಹೊಸ ಸಾಲವೂ ಸಿಗದೆ ಆತಂಕಕ್ಕೊಳಗಾಗಿದ್ದಾರೆ.ಹೈನುಗಾರಿಕೆ ಮೇಲೆ ಅವಲಂಬಿತಾಗಿರುವ ರೈತರಿಗೆ ಮಳೆಯ ಅಭಾವದಿಂದ ಮೇವಿನ ಕೊರತೆ ಕಂಡು ಬಂದಿದೆ. ಇನ್ನು ೧೫ ದಿನಗಳಲ್ಲಿ ಮಳೆ ಬಾರದಿದ್ದರೆ, ಹೈನುಗಾರರೂ ಸಹ ತಮ್ಮ ಜಾನುವಾರುಗಳನ್ನು ಮಾರಿಕೊಂಡು ಗುಳೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ದಿನೇ ದಿನೇ ಅಂತರ್ಜಲ ಕುಸಿತದ ಪರಿಣಾಮ ಕುಡಿಯುವ ನೀರಿಗೂ ಆಹಾಕಾರ ಆರಂಭವಾಗಿದ್ದು, ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ, ಚಿಕ್ಕನಾಯಕಹಳ್ಳಿ ಭಾಗಗಳಿಗೆ ಶಾಶ್ವತವಾದ ನದಿಮೂಲದ ನೀರನ್ನು ಕೊಡುತ್ತೇವೆ ಎಂದು ಹೇಳುತ್ತಲೇ ಸರ್ಕಾರಗಳು ಕಾಲದೂಡುತ್ತಿವೆ, ಇದುವರೆಗೂ ಕೊಟ್ಟ ಭರವಸೆಗಳು ಈಡೇರಲೇ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ, ಪಾವಗಡ ಕಡೆಯಿಂದ ನಾಲೆ ತೆಗೆಯುವ ಕಾಮಗಾರಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸುತ್ತೇವೆ ಎಂದು ತಿರುಮಣಿ ಸೋಲಾರ್ ಪಾರ್ಕ್ ಉದ್ಘಾಟನೆಗೆ ಆಗಮಿಸಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಹೇಳಿದ್ದರು.ಆದರೆ ಈವರೆಗೂ ನಾಲೆ ತೆಗೆಯುವ ಕಾಮಗಾರಿಗೆ ಚಾಲನೆ ದೊರೆತಿಲ್ಲ, ರಾಜ್ಯ ಸರಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿದರು.
ಇನ್ನು ಎತ್ತಿನ ಹೊಳೆ ಯೋಜನೆಯೂ ಸಹ ಬರೀ ಘೋಷಣೆಗೆ ಸೀಮಿತವಾಗಿದ್ದು, ಇದೂ ಕಾರ್ಯಗತವಾಗಿಲ್ಲ, ಕೂಡಲೇ ಈ ಎರಡೂ ಯೋಜನೆಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಬರಪೀಡಿತ ಜಿಲ್ಲೆಗೆ ತಕ್ಷಣ ಬರಪರಿಹಾರದ ಕಾರ್ಯ ಯೋಜನೆಗಳನ್ನು ರೂಪಿಸಬೇಕು, ಇಲ್ಲದಿದ್ದರೆ ಚುನಾಯಿತ ಜನಪ್ರತಿನಿಧಿಗಳು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರುಗಳ ಸಭೆ ಕರೆದು ಅವಿಸ್ತಾರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿಮೆ ವಿತರಣೆಯಲ್ಲಿ ತಾರತಮ್ಯ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರು ಪಾವತಿಸಿರುವ ವಿಮೆಗೆ ವಿಮಾ ಕಂಪನಿಗಳು ಹಾಗೂ ಅಧಿಕಾರಿಗಳು ವಿಮೆ ವಿತರಣೆಯಲ್ಲಿ ತಾರತಮ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸ್ನೇಕ್ ನಂದೀಶ್,ಸಾಗರನಹಳ್ಳಿ ವಿಜಯ್‌ಕುಮಾರ್, ಚಂದ್ರನಾಯ್ಕ, ಶಿವಕುಮಾರ್ ಮುಂತಾದವರು ಹಾಜರಿದ್ದರು.
No comments:
Post a Comment