Wednesday, 5 September 2018

ವಿಜಯೋತ್ಸವದ ವೇಳೆ ರಾಸಾಯನಿಕ ಎರಚಿದ ಪ್ರಕರಣ

ಉದ್ದೇಶಪೂರ್ವಕ ಘಟನೆಯಲ್ಲ: ಎಸ್.ಪಿ ಸ್ಪಷ್ಟನೆ
ತುಮಕೂರು: ತುಮಕೂರು ಮಹಾನಗರಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದ ನಂತರ ೧೬ನೇ ವಾರ್ಡ್‌ನಿಂದ ಜಯಗಳಿಸಿದ ಇನಾಯಿತ್ ಉಲ್ಲಾಖಾನ್ ಅವರು ಇಲ್ಲಿನ ಬಾರ್‌ಲೈನ್ ರಸ್ತೆಯಲ್ಲಿ ಸಂಭ್ರಮಾಚಾರಣೆ ಮಾಡುತ್ತಿದ್ದಾಗ ರಾಸಾಯನಿಕ ವಸ್ತುವಿನಿಂದ ಗುಂಪಿನಲ್ಲಿದ್ದವರಿಗೆ ಗಾಯವಾಗಿರುವ ಘಟನೆ ಉದ್ದೇಶಪೂರ್ವಕವಲ್ಲ. ಅರಿವಿಲ್ಲದೆ ಆಗಿರುವ ಆಕಸ್ಮಿಕ ಘಟನೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ|| ದಿವ್ಯಾಗೋಪಿನಾಥ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೧೬ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಕೋತಿತೋಪಿನಿಂದ ಗೆದ್ದ ಅಭ್ಯರ್ಥಿಯೊಂದಿಗೆ ಕಾರ್ಯಕರ್ತರು ವಿಜಯೋತ್ಸವದೊಂದಿಗೆ ಬಾರ್‌ಲೈನ್‌ನ ೩ನೇ ಕ್ರಾಸ್‌ಗೆ ಬಂದಾಗ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬಾಟಲಿಯಿಂದ ದ್ರಾವಣವನ್ನು ಗುಂಪಿನ ಮೇಲೆ ಎರಚಿದಾಗ ಕೆಲವರಿಗೆ ಗಾಯಗಳಾಗಿದ್ದು,ಇದನ್ನು ಆಸಿಡ್ ದಾಳಿ ಎಂದು ತಪ್ಪಾಗಿ ಬಿಂಬಿಸಲಾಗಿತ್ತು.



ಗೆದ್ದ ಅಭ್ಯರ್ಥಿಯ ಅಪ್ರಾಪ್ತ ಬೆಂಬಲಿಗನೊಬ್ಬ್ಬ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಮನೆಯ ಕಿಟಕಿಯಲ್ಲಿ ಕಂಡ ಹಸಿರು ಬಣ್ಣದ ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಂಡು,ಅದರಲ್ಲಿ ಇದ್ದ ಸ್ವಲ್ಪ ದ್ರಾವಣದ ಜೊತೆಗೆ ನೀರು ಮತ್ತು ನೀಲಿ ಬಣ್ಣವನ್ನು ಬೆರಸಿ ತನ್ನ ತಲೆಯ ಮೇಲೆ ಬಾಟಲಿಯನ್ನು ತಿರುಗಿಸಿದಾಗ ಆ ನೀರು ಗುಂಪಿನ ಮೇಲೆ ಬಿದ್ದು ಅವರ ಜೊತೆ ಈತನು ಗಾಯಗೊಂಡಿದ್ದಾನೆ ಎಂದರು.
ಸದರಿ ಬಾಟಲಿಯಲ್ಲಿ ಟಾಯ್ಲೆಟ್ ತೊಳೆಯುವ ಆಸಿಡ್ ಇದ್ದು,ಇದರ ಅರಿವು ಇಲ್ಲದ ಅಪ್ರಾಪ್ತ ಬಾಲಕ ತನ್ನಿಬ್ಬರು ಗೆಳೆಯರ ಜೊತೆ ಅದಕ್ಕೆ ನೀರು ಮತ್ತು ಬಣ್ಣ ಹಾಕಿ ಸಂಭ್ರಮಾಚಾರಿಸಿದಾಗ ಈ ಅವಘಡ ಸಂಭವಿಸಿದ್ದು,ಇದು ಉದ್ದೇಶಪೂರ್ವಕವಾಗಿ ಮಾಡಿದ ಘಟನೆಯಲ್ಲ ಎಂಬುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಸ್ಪಷ್ಟಪಡಿಸಿದರು.
ನಗರ ಡಿವೈಎಸ್ಪಿ ಕೆ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ನಗರ ಪಿಎಸ್‌ಐ ವಿಜಯಲಕ್ಷ್ಮಿ,ಅಪರಾಧ ವಿಭಾಗ ಪಿಎಸ್‌ಐ ಸಿ.ಆರ್.ಭಾಸ್ಕರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಮೆರವಣಿಗೆಯ ದೃಶ್ಯಾವಳಿ ಇರುವ ವಿಡಿಯೋವನ್ನು ಆಧರಿಸಿ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದರು.
ಬಾಲ ಅಪರಾಧ ಕಾಯ್ದೆ ಅನುಸಾರ ಸದರಿ ಅಪ್ರಾಪ್ತ ಹುಡುಗನ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ ಎಂದ ಅವರು, ಈ ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು,ಈ ಘಟನೆಗೆ ಕಾರಣವಾಗಿರುವ ದ್ರಾವಣವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು,ಅದರ ವರದಿ ಬಂದ ನಂತರ ಸದರಿ ಬಾಟಲಿಯಲ್ಲಿದ್ದ ದ್ರಾವಣ ಯಾವುದು ಎಂಬುದು ಪತ್ತೆಯಾಗಲಿದೆ ಎಂದರು.
ಹೆಚ್ಚುವರಿ ಎಸ್ಪಿ ಡಾ|| ಶೋಭಾರಾಣಿ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

No comments:

Post a Comment

vishalaprabha 09-02-2019 pages