Wednesday, 5 September 2018

ಮತದಾರರ ಪಟ್ಟಿ ಗೊಂದಲ ಬಿಜೆಪಿ ಗೆಲುವಿಗೆ ಅಡ್ಡಿ: ಜ್ಯೋತಿ ಗಣೇಶ್


ಮತದಾರರ ಪಟ್ಟಿ ಗೊಂದಲ ಬಿಜೆಪಿ ಗೆಲುವಿಗೆ ಅಡ್ಡಿ: ಜ್ಯೋತಿ ಗಣೇಶ್

ತುಮಕೂರು: ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದ ಮೇಲೆ ಪಾಲಿಕೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿ ಕಳೆದ ಭಾರಿಗಿಂತ ಮೂರುಪಟ್ಟು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಮತದಾರರಪಟ್ಟಿಯಲ್ಲಿನ ಕೆಲವೊಂದು ಲೋಪದೋಷಗಳಿಂದ ಇನ್ನೂ ಕೆಲವು ವಾರ್ಡುಗಳಲ್ಲಿ ಗೆಲುವಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.



ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಕೆಲ ಅಧಿಕಾರಿಗಳ ಲೋಪದಿಂದಾಗಿ ನಗರದ ಬಹುತೇಕ ವಾರ್ಡ್‌ಗಳಲ್ಲಿನ ಮತದಾರರ ಪಟ್ಟಿಯಲ್ಲಿ ಸತ್ತವರು ಹೆಸರು ಇದ್ದು,ಬದುಕಿವರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದರು.
ವಾರ್ಡ್ ಮರು ವಿಂಗಡಣೆಯಿಂದಾಗಿ ಬಹುತೇಕ ಮತದಾರರ ಹೆಸರುಗಳು ಒಂದು ವಾರ್ಡ್‌ನಿಂದ ಇನ್ನೊಂದು ವಾರ್ಡ್‌ಗೆ ವರ್ಗಾವಣೆಯಾಗಿದೆ. ಇದಕ್ಕೆ ಚುನಾವಣಾ ಆಯೋಗದ ವೈಫಲ್ಯವೇ ಕಾರಣ ಎಂದ ಅವರು, ಮತದಾರರ ಪಟ್ಟಿಯಲ್ಲಿ ಲೋಪ ಉಂಟಾಗಿ ಮತದಾರರನ್ನು ಗೊಂದಲಕ್ಕೀಡು ಮಾಡಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು. 
ಕಳೆದ ೨೫ ವರ್ಷಗಳಿಂದ ವಾಸ ಇರುವವರ ಹೆಸರುಗಳನ್ನು ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಮತಪಟ್ಟಿಯಿಂದ ಕೈ ಬಿಡಲಾಗಿದೆ. ಆದರೆ ಮೃತಪಟ್ಟಿರುವವರ ಹೆಸರುಗಳು ಮಾತ್ರ ಹಾಗೆಯೇ ಉಳಿದಿವೆ.ಇದಕ್ಕೆ ಆಯಾ ಬೂತ್ ಮಟ್ಟದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಹಾಗಾಗಿ ಅಂಥ ಅಧಿಕಾರಿಗಳನ್ನು ಪತ್ತೆಹಚ್ಚಿ ಪಟ್ಟಿ ಮಾಡುತ್ತಿದ್ದು, ಅವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ೨.೫೬ ಲಕ್ಷ ಮತದಾರರು ಇದ್ದರು. ಆದರೆ ಮಹಾನಗರ ಪಾಲಿಕೆ ಚುನಾವಣೆಯ ಮತಪಟ್ಟಿಯಲ್ಲಿ ೨.೪೬ ಲಕ್ಷ ಮತದಾರರು ಮಾತ್ರ ಇದ್ದು, ಉಳಿದ ೧೦ ಸಾವಿರ ಮತದಾರರು ಹೆಸರುಗಳೇ ಮಂಗಮಾಯವಾಗಿವೆ.ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ೩೩ ವಾರ್ಡ್‌ಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಈ ಪೈಕಿ ೧೨ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿರುವ ನಗರದ ಜನತೆಗೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ತುಮಕೂರು ಸ್ಮಾರ್ಟ್ ಸಿಟಿಯಾಗುತ್ತಿದೆ. ಸ್ಮಾರ್ಟ್‌ಸಿಟಿಯ ಅಭಿವೃದ್ಧಿಗೆ ಗೆದ್ದ ಸದಸ್ಯರೊಂದಿಗೆ ಸೋತಿರುವ ಸದಸ್ಯರುಗಳು ಸಹ ಶ್ರಮಿಸಬೇಕು. ಶಾಸಕನಾಗಿರುವ ನಾನು ಸದಾ ಎಲ್ಲರೊಂದಿಗೆ ಕೈಜೋಡಿಸುತ್ತೇನೆ ಎಂದರು.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಎಂಬ ಕೆಲವರು ಷಡ್ಯಂತ್ರ ರೂಪಿಸಿದ್ದರು.ಹಾಗಾಗಿ ೧೨ ಸ್ಥಾನಗಳಿಗಷ್ಟೇ ಸೀಮಿತವಾಗಬೇಕಾಯಿತು. ಜತೆಗೆ ಚುನಾವಣಾ ದಿನಾಂಕ ಘೋಷಣೆ ದಿಢೀರೆಂದು ಆಗಿದ್ದರಿಂದ ತಮಗೂ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಲು ಸಮಯಾವಕಾಶದ ಅಭಾವ ಎದುರಾಯಿತು. ಹಾಗಾಗಿ ಮತ್ತಷ್ಟು ಸೀಟುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ನಗರಾಧ್ಯಕ್ಷ ಹಾಗೂ ಪಾಲಿಕೆ ನೂತನ ಸದಸ್ಯ ಸಿ.ಎನ್. ರಮೇಶ್, ನೂತನ ಪಾಲಿಕೆ ಸದಸ್ಯರಾದ ಹೆಚ್. ಮಲ್ಲಿಕಾರ್ಜುನಯ್ಯ, ನಳಿನ ಇಂದ್ರಕುಮಾರ್, ಮಾಜಿ ಸದಸ್ಯ ಬಾವಿಕಟ್ಟೆ ನಾಗಣ್ಣ, ಹೆಬ್ಬಾಕ ರವೀಶ್, ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.(ಫೊಟೋ ಇದೆ.೦೪ಟಿಯುಎಂ೪)

No comments:

Post a Comment

vishalaprabha 09-02-2019 pages