ಇಂಧನ ಬೆಲೆ ಹೆಚ್ಚಳ ಕೇಂದ್ರದ ವೈಫಲ್ಯ
ಖಂಡಿಸಿ ಸೆ.೧೦ ರಂದು ಪ್ರತಿಭಟನೆ
ತುಮಕೂರು: ಪೆಟ್ರೋಲ್,ಡೀಸೆಲ್ ಏರಿಕೆ ಸೇರಿದಂತೆ ಕೇಂದ್ರ ಸರಕಾರದ ಎಲ್ಲಾ ವೈಫಲ್ಯಗಳನ್ನು ಖಂಡಿಸಿ ಸೆ.೧೦ರಂದು ದೇಶವ್ಯಾಪಿ ಎಡಪಕ್ಷಗಳು ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಜಿಲ್ಲೆಯಲ್ಲೂ ಮುಷ್ಕರ ಹಮ್ಮಿಕೊಂಡಿರುವುದಾಗಿ ಸಿಪಿಎಂ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಆಯೋಜಿಸಿದ್ದ ಸುದ್ದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕ ಕುಸಿತದಿಂದ ಸಾಮಾನ್ಯ ಜನರು ತತ್ತರಿಸಿಹೋಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಲೆ ಏರಿಕೆಯಿಂದ ದೇಶಾದ್ಯಂತ ಬಡವರು, ಮಧ್ಯಮವರ್ಗದವರು ನರಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದ್ದರೂ ಸಹ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಖಂಡನೀಯ, ಒಂದು ದೇಶ, ಒಂದೇ ತೆರಿಗೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದರ ವ್ಯಾಪ್ತಿಗೆ ತರಲಿಲ್ಲ, ಆದ್ದರಿಂದ ಕೇಂದ್ರ ಸರಕಾರ ಏರಿಸಿರುವ ಪೆಟ್ರೋಲ್ ಡೀಸೆಲ್ ಸೇರಿದಂತೆ ಏರಿಕೆ ಮಾಡಿರುವ ಎಲ್ಲಾ ತೆರಿಗೆಗಳನ್ನು ಇಳಿಸಬೇಕೆಂದು ಒತ್ತಾಯಿಸಿದರು.
ಸಿಪಿಐ ಕಾರ್ಯದರ್ಶಿ ಗಿರೀಶ್ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಯವರು ಅಧಿಕಾರಕ್ಕೆ ಬರುವ ಮುನ್ನ ಜನತೆಗೆ ಕೊಟ್ಟ ಭರವಸೆಗಳೆಲ್ಲಾ ಹುಸಿಯಾಗಿವೆ.ಇನ್ನು ಮೂರೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ೧೦೦ ರೂ. ದಾಟಿದರೂ ಆಶ್ಚರ್ಯ ಪಡಬೇಕಿಲ್ಲ,ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೇವಾಶುಲ್ಕ ವಾಪಸ್ ತೆಗೆಯದ ರೀತಿಯಲ್ಲಿ ಹಣಕಾಸು ಸಚಿವರು ಬೆಲೆ ಏರಿಕೆಯ ಶಾಕ್ ನೀಡುತ್ತಿದ್ದಾರೆ ಎಂದರು.
ರೈತರು ಮತ್ತು ಕೃಷಿ ಚಟುವಟಿಕೆ ಸಂಕಷ್ಟ ಸ್ಥಿತಿಯಲ್ಲಿದೆ.ಕೃಷಿ ಉತ್ಪಾದನಾ ವೆಚ್ಚ ಅಧಿಕವಾಗಿದ್ದು,ಇದು ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಕಾರ್ಮಿಕರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಡುತ್ತಿಲ್ಲ, ಅಸಂಘಟಿತ ಕಾರ್ಮಿಕರನ್ನು ಕಡೆಗಣಿಸುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಬಂಡವಾಳಶಾಹಿಗಳ ೪ ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುವ ಮೂಲಕ ಉಳ್ಳವರ, ಶ್ರೀಮಂತರ ಪರ ನಿಂತು ಆಡಳಿತ ನಡೆಸುತ್ತಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಕೇಂದ್ರ ಸರಕಾರಕ್ಕೆ ಚಾಟಿ ಬೀಸಲು ಎಡಪಕ್ಷಗಳು ಜಂಟಿಯಾಗಿ ಸೆ.೧೦ರಂದು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎಸ್‌ಯುಸಿಐ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಮಾತನಾಡಿ,ದೇಶದಲ್ಲಿ ಕೃಷಿಕರು,ರೈತರು ಸಾಕಷ್ಟು ಸಂಕಷ್ಟ ಅನುಭವಿ ಸುತ್ತಿದ್ದಾರೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ರೈತರ ಕೃಷಿ ಚಟುವಟಿಕೆಗಳು ಹಾಗೂ ಗೊಬ್ಬರ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ, ರೈತರ ಉತ್ಪಾದನೆಗೆ ತಕ್ಕ ಬೆಲೆ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರಕಾರ ಸುಲಿಗೆ ಕೋರರ ಪರ ನಿಂತಿದ್ದು, ಬಂಡವಾಳಗಾರರ ಜೇಬು ತುಂಬಿಸಲು ಹೊರಟಿದೆ ಎಂದು ಆರೋಪಿಸಿದರು.
ಸಿಪಿಎಂ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ,ಕೇಂದ್ರ ಸರಕಾರದ ವಿರುದ್ಧ ಎಡಪಕ್ಷಗಳು ಜಂಟಿಯಾಗಿ ಸೆ.೧೦ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ತುಮಕೂರಿನಲ್ಲೂ ಅಂದು ಬೆಳಗ್ಗೆ ೧೧ ಗಂಟೆಗೆ ನಗರದ ಟೌನ್‌ಹಾಲ್ ವೃತ್ತದಿಂದ ಬಿಎಸ್‌ಎನ್‌ಎಲ್ ಕಚೇರಿವರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ರಸ್ತೆತಡೆ ನಡೆಸಲಾ ಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
No comments:
Post a Comment