Saturday, 8 September 2018

ನೆರವಿಗೆ ಬಾರದ ಮೋದಿ: ಡಿಸಿಎಂ ಪರಂ ಆರೋಪ

ನೆರವಿಗೆ ಬಾರದ ಮೋದಿ: ಡಿಸಿಎಂ ಪರಂ ಆರೋಪ


ಕೊರಟಗೆರೆ: ರಾಜ್ಯದಲ್ಲಿ ಸತತ ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಕುಟುಂಬಕ್ಕೆ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ ರಕ್ಷಣೆ ಜೊತೆ ಹಣಕಾಸಿನ ನೆರವು ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ರಾ
ಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಶ್ರೀಆಂಜನೇಯ ದೇವಾಲಯದ ಆವರಣದಲ್ಲಿ ತುಮಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರ ರಕ್ಷಣೆ ಮತ್ತು ರಕ್ಷಣೆಗಾಗಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ೧೦ ಸಾವಿರ ಕೋಟಿ ರೈತರ ಸಾಲ ಮನ್ನಾವಾಗಿದೆ. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ೪೯ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುವುದರ ಜೊತೆ ಕೈಸಾಲ ಪಡೆದು ಬಡ್ಡಿ ಕಟ್ಟುತ್ತಿರುವ ರೈತರಿಗೆ ಋಣಮುಕ್ತ ಖಾಯಿದೆಯನ್ನು ಜಾರಿಗೆ ತರಲು ತಿರ್ಮಾನ ಮಾಡಲಾಗಿದೆ ಎಂದರು.



ಭಾರತ ವಿಶ್ವದಲ್ಲಿಯೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶವಾಗಿದೆ. ಪ್ರಪಂಚದಲ್ಲಿ ಶೇ.೧೭ರಷ್ಟು ಹಾಲನ್ನು ನಮ್ಮ ದೇಶದ ರೈತರೇ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ೭೬ ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ರಾಜ್ಯ ದೇಶದ ಎರಡನೇ ಒಣ ಪ್ರದೇಶವಾಗಿದೆ. ಆದ್ದರಿಂದ ರೈತ ಸಮುದಾಯ ಹೈನುಗಾರಿಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು  ಡಿಸಿಎಂ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.
ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಹೇಮಾವತಿ ನೀರನ್ನು ನಮ್ಮ ಕೊರಟಗೆರೆ ತಾಲೂಕಿನ ಪ್ರತಿಯೊಂದು ಕೆರೆಗಳಿಗೆ ಹರಿಸುವ ಪ್ರಯತ್ನ ಮಾಡಬೇಕು. ಬರಗಾಲ ಪೀಡಿತ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕುಂಠಿತವಾದರೂ ಪರವಾಗಿಲ್ಲ, ಆದರೆ ರೈತರ ಉಳಿವಿಗಾಗಿ ನೀರಾವರಿ ಯೋಜನೆ ಮಾತ್ರ ತ್ವರಿತವಾಗಿ ಜಾರಿಯಾಗಬೇಕು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ರೈತರ ರಕ್ಷಣೆಗೆ ನಾವೆಲ್ಲರೂ ಸಹಾಯಹಸ್ತ ನೀಡಬೇಕು ಎಂದರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ಹೈನುಗಾರಿಕೆ ರೈತರ ಅಭಿವೃದ್ಧಿಗೆ ಸಹಾಯವಾಗಲಿದೆ. ರೈತರು ಆತ್ಮಹತ್ಯೆ ಯೋಚನೆಯನ್ನು ಸಹ ಮಾಡಬಾರದು. ಸತತ ೬ ವರ್ಷದ ಬರಗಾಲದಿಂದ ಕೊರಟಗೆರೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ಸರಕಾರ ನೆರವು ನೀಡಬೇಕು. ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಭಕ್ತರ ಸಹಾಯದಿಂದ ಕೊಡಗಿನ ರೈತರಿಗೆ ಮನೆ ನಿರ್ಮಾಣ ಮಾಡಿಕೊಡಲು ತಿರ್ಮಾನ ಮಾಡಲಾಗಿದ್ದು, ಭಕ್ತರು ಸಹಾಯಹಸ್ತ ನೀಡಬೇಕು ಎಂದು ಮನವಿ ಮಾಡಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ ನಮ್ಮ ದೇಶ ನೆಮ್ಮದಿಯಿಂದ ಇರಬೇಕಾದರೆ ರೈತನ ಬದುಕು ಆರ್ಥಿಕವಾಗಿ ಸದೃಢ ಆಗಬೇಕು. ೨೦೨೨ರೊಳಗೆ ರೈತರ ಆದಾಯ ಎರಡರಷ್ಟು ಆಗುವ ಮಹತ್ವವಾದ ಯೋಜನೆಯನ್ನು ಕೇಂದ್ರ ಸರಕಾರ ತ್ವರಿತವಾಗಿ ಜಾರಿಗೆ ತರುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲಬೇಕು. ರೈತರು ಬೆಳೆದಿರುವ ಬೆಳೆಗಳಿಗೆ ಸರಕಾರಗಳಿಂದ ಪೂರಕವಾದ ಬೆಂಬಲ ಬೆಲೆ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಅಧ್ಯಕ್ಷ ಕೋಂಡವಾಡಿ ಚಂದ್ರಶೇಖರ್, ತಾಲೂಕು ನಿರ್ದೇಶಕ ವಿಜಯಶಂಕರ್, ವ್ಯವಸ್ಥಾಪಕ ನಿರ್ದೇಶಕ ಬಿ.ಮುನೇಗೌಡ, ಜಿಪಂ ಸದಸ್ಯೆ ಪ್ರೇಮಾ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಕೆಪಿಸಿಸಿ ಕಾರ್ಯದರ್ಶಿ ಅನೀಲ್‌ಕುಮಾರ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕ್ರಣ್ಣ, ನಗರಧ್ಯಕ್ಷ ಅಶ್ವತ್ಥನಾರಾಯಣ ಇದ್ದರು.

No comments:

Post a Comment

vishalaprabha 09-02-2019 pages