ಬೂದಗವಿಯ ದಲಿತರ ಶರಣರ ಸಮಾಧಿ ಸಂರಕ್ಷಣೆಗೆ ದಲಿತ ಸಂಘಟನೆಗಳ ಒತ್ತಾಯ
ತುಮಕೂರು.ಸೆ.೦೪: ಕೊರಟಗೆರೆ ತಾಲೂಕು ಸಿದ್ದರಬೆಟ್ಟದ ಬೂದುಗವಿ ಬಳಿ ಇರುವ ದಲಿತ ಸಮುದಾಯಕ್ಕೆ ಸೇರಿದ ಶರಣರಾದ ಶ್ರೀಚನ್ನಿಗಮ್ಮ ಮತ್ತು ಶ್ರೀಗಂಗಪ್ಪ ಅವರುಗಳ ಪುರಾತನ ಸಮಾಧಿಗಳನ್ನು ಅರಣ್ಯ ಇಲಾಖೆ ರಕ್ಷಿಸಬೇಕು ಹಾಗೂ ಸಮಾಧಿಗಳ ಪೂಜೆ ಕೈಂಕರ್ಯಕ್ಕೆ ಅನುವು ಮಾಡಿಕೊಡಬೇಕೆಂದು ಮಾದಿಗ ವಿಮೋಚನಾ ಸ್ವಾಭಿಮಾನಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೇಶವಮೂರ್ತಿ ಸರಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಬಸವಣ್ಣನವರ ಕಾಯಕ, ದಾಸೋಹ ಶರಣ ಸಂಸ್ಕೃತಿಗೆ ಮಾರುಹೋದ ಶ್ರೀಚನ್ನಿಗಮ್ಮ ಮತ್ತು ಶ್ರೀಗಂಗಪ್ಪ ಅವರುಗಳು, ಸಿದ್ದರಬೆಟ್ಟದ ತಪ್ಪಲಿನ ೩:೨೦ ಎಕರೆ ಜಾಗದಲ್ಲಿ ಒಂದು ಸಣ್ಣ ಕೊಳ ನಿರ್ಮಿಸಿಕೊಂಡು,ಸಿದ್ದರಬೆಟ್ಟದ ಸಿದ್ದೇಶ್ವರಸ್ವಾಮಿಗೆ ದರ್ಶನಕ್ಕೆ ಬರುವ ಭಕ್ತರ,ಸ್ವಾಮಿಜಿಗಳ ಸೇವಾ ಮಾಡುತ್ತಾ, ಅವರಿಗೆ ದಾಸೋಹ ನೀಡುತ್ತಾ ತಮ್ಮ ಕಾಯಕ ತತ್ವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿರುತ್ತಾರೆ.ಇದರ ಕುರುಹಾಗಿ ಸಿದ್ದರಬೆಟ್ಟಕ್ಕೆ ಹತ್ತುವ ಮೊದಲನೇಯ ಮೆಟ್ಟಿಲಿನಲ್ಲಿ ಶ್ರೀಚನ್ನಿಗಪ್ಪ ಮೆಟ್ಟಿಲು ಎಂದು ಹೆಸರಿಟ್ಟಿದ್ದು, ಭಕ್ತರು ಇಂದಿಗೂ ಅದನ್ನು ಶ್ರದ್ದಾ, ಭಕ್ತಿಯಿಂದ ಪೂಜಿಸುತ್ತಾರೆ. ಇಂದು ಒಂದು ಐತಿಹಾಸಿಕ ದಾಖಲೆಯಾಗಿದೆ.
ಸದರಿ ಶ್ರೀಚನ್ನಿಗಮ್ಮ ಮತ್ತು ಅವರ ಮಗ ಶ್ರೀಗಂಗಪ್ಪ ಅವರುಗಳ ಕಾಲಾನಂತರ ಅವರ ಸಮಾಧಿಗಳನ್ನು ಅದೇ ಸ್ಥಳದಲ್ಲಿ ಮಾಡಿ,ಎಲ್ಲಾ ಸಮುದಾಯಕ್ಕೆ ಸೇರಿದ ಭಕ್ತರು ಪೂಜಿಸುತ್ತಾ ಬಂದಿದ್ದಾರೆ.೧೯೮೮ರಲ್ಲಿ ಅಂದಿನ ತಹಶೀಲ್ದಾರರು ಸದರಿ ಜಾಗವನ್ನು ಅಭಿವೃದ್ದಿ ಪತ್ರವನ್ನು ಸಹ ಕುಟುಂಬದ ಸದಸ್ಯರಿಗೆ ನೀಡಿರುತ್ತಾರೆ.ಆದರೆ ಕೆಲ ವರ್ಷಗಳಿಂದ ಸಿದ್ದರಬೆಟ್ಟದ ತಪ್ಪಲಿನಲ್ಲಿ ಬೇರೆ ಸಮುದಾಯದ ಮಠಗಳು ಆರಂಭವಾದ ನಂತರ, ಶ್ರೀಚನ್ನಿಗಮ್ಮ ಮತ್ತು ಶ್ರೀಗಂಗಪ್ಪ ಅವರ ಸಮಾಧಿಗಳಿಗೆ ಪೂಜೆ, ಪುನಸ್ಕಾರಕ್ಕೆ ಅರಣ್ಯ ಇಲಾಖೆ ಅವಕಾಶ ಮಾಡಿಕೊಡುತ್ತಿಲ್ಲ.ಅಲ್ಲಿರುವ ಬಾವುಟ ಕಿತ್ತು ಹಾಕಿ, ಯಾರು ಪೂಜೆ ಮಾಡದಂತೆ ತಡೆಯೊಡುತಿದ್ದಾರೆ.ಅಲ್ಲದೆ ಅಕ್ಕಪಕ್ಕದಲ್ಲಿರುವ ಮಠಗಳು ತಮ್ಮ ಗಲೀಜು ನೀರನ್ನು ಸಮಾಧಿ ಇರುವ ಸ್ಥಳಗಳಿಗೆ ಹರಿಯುವಂತೆ ಮಾಡಿ, ಪೂಜಾ ಕೈಂಕರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಆಯೋಗಕ್ಕೆ ಸದರಿ ಸಮಾಧಿಗಳನ್ನು ಸಂರಕ್ಷಿಸಿ, ಭಕ್ತರು ಪೂಜೆ ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಮೂರು ತಿಂಗಳ ಹಿಂದೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಆಯೋಗ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶ್ರೀಚನ್ನಿಗಮ್ಮ ಮತ್ತು ಶ್ರೀ ಗಂಗಪ್ಪ ಅವರ ಸಮಾಧಿಗಳನ್ನು ಸಂರಕ್ಷಣೆಗೆ ಅಗತ್ಯ ಕ್ರಮದ ಜೊತೆಗೆ, ಅಲ್ಲಿಗೆ ಪೂಜೆಗಾಗಿ ಬರುವ ಸ್ವಾಮೀಜಿಗಳಿಗೆ ರಕ್ಷಣೆ ಒದಗಿಸುವಂತೆ ನೊಟೀಷ್ ಸಹ ನೀಡಿದೆ.ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಸೆಪ್ಟಂಬರ್ ೦೯ ರಂದು ಸದರಿ ಸ್ಥಳದಲ್ಲಿ ಸಮಾಧಿಗಳ ಪೂಜೆಯ ಜೊತೆಗೆ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಸದರಿ ಸ್ಥಳದ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು,ಜೊತೆಗೆ ಅಲ್ಲಿಗೆ ಬರುವ ಭಕ್ತಾಧಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಮಾದಿಗ ವಿಮೋಚನಾ ಹೋರಾಟ ಸಮಿತಿ ಅಧ್ಯಕ್ಷ ಕೇಶವಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ವಿಮೋಚನಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ, ಗೌರವಾಧ್ಯಕ್ಷ ಸಿದ್ದಗಂಗಪ್ಪ, ಓಂ ಗಂಗಾ ಆಧ್ಯಾತ್ಮಿಕ ವೇದಾಂತ ಆಶ್ರಮ(ರಿ)ಬೂದಗವಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
No comments:
Post a Comment