Thursday, 20 September 2018

ಖರ್ಗೆ-ಪರಂ ಛಲವಾದಿ ಪರಮಾಧಿಕಾರಿ

ಬಲಗೈ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜು

ತುಮಕೂರು: ಕಳೆದ ಹಲವು ದಶಕಗಳಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟದೊಂದಿಗೆ ಎಡ-ಬಲದ ಸಮೀಕರಣ ರಾಜ್ಯ ರಾಜಕಾರಣದಲ್ಲಿ ಹಲವು ಹೊಸ ಅಯಾಮಗಳಿಗೆ ನಾಂದಿ ಹಾಡಿದೆ. ಇದೀಗ ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಛಲವಾದಿ ಸಮುದಾಯದ ಜನಪ್ರತಿನಿಧಿಗಳಿಗೆ ಇಂದು ನಡೆಯುತ್ತಿರುವ ಅಭಿನಂದನಾ ಸಮಾರಂಭ ಒಂದು ರೀತಿಯಲ್ಲಿ ಬಲಗೈ ಪಂಗಡದ ಶಕ್ತಿ ಪ್ರದರ್ಶನ, ಬಲವರ್ಧನೆ ಹಾಗೂ ಒಗ್ಗೂಡುವಿಕೆಯ ವೇದಿಕೆಯಾಗಿ ಪರಿಣಮಿಸಿದೆ.
ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯವನ್ನು ಅದೇ ವರ್ಗಕ್ಕೆ ಸೇರಿದ ಬಲಾಢ್ಯ ಉಪ ಪಂಗಡಗಳು ಕಬಳಿಸುತ್ತಿವೆ. ರಾಜಕೀಯ ಅಧಿಕಾರವೂ ಸೇರಿದಂತೆ ನೌಕರಿ, ವಿದ್ಯಾಭ್ಯಾಸದಲ್ಲೂ ಎಡಗೈ ಪಂಗಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಮೀಸಲಾತಿ ಸೌಲಭ್ಯ ದೊರೆಯುತ್ತಿಲ್ಲ ಎನ್ನುವುದು ದಶಕಗಳ ಆರೋಪದ ಕೂಗು.
ಸರ್ಕಾರದ ಅನೇಕ ವರದಿಗಳು ಹಾಗೂ ಸಮೀಕ್ಷೆಗಳ ಪರಿಣಾಮವಾಗಿ ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿರುವ ಅನೇಕ ಉಪ ಪಂಗಡಗಳು ಮೂಲ ಮೀಸಲಾತಿ ಪಟ್ಟಿಯಲ್ಲಿದ್ದ ಹಾಗೂ ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಎಡಗೈ ಸಮುದಾಯದ ಮೀಸಲಾತಿ ಸೌಲಭ್ಯದ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎನ್ನುವ ವಿಚಾರ ಮುಂದಿಟ್ಟುಕೊಂಡು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಎ, ಬಿ, ಸಿ  ವರ್ಗೀಕರಣದ ಮೂಲಕ ಜಾರಿಗೆ ತರಬೇಕು. ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಈ ಹಿಂದಿನಿಂದಲ್ಲೂ ಪ್ರಬಲವಾದ ಹೋರಾಟಗಳು, ಪಾದಯಾತ್ರೆ, ಪ್ರತಿಭಟನೆಗಳು ನಡೆದರೂ ಸರ್ಕಾರದ ಮಟ್ಟದಲ್ಲಿ ಬಲಗೈ ಪ್ರತಿನಿಧಿಗಳೇ ಮೇಲಗೈ ಸಾಧಿಸಿರುವುದರಿಂದ ದಶಕಗಳು ಕಳೆದರೂ ಸದಾಶಿವ ಆಯೋಗದ ವರದಿ ಪರಿಶೀಲನೆ ಹಂತದಲ್ಲೇ ಉಳಿದುಕೊಂಡಿದೆ.



೨೦೧೩ ರಿಂದ ೨೦೧೮ರ ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸದಾಶಿವ ಆಯೋಗದ ಪರವಾಗಿದ್ದಾರೆ. ಇನ್ನೇನು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿದ್ದಾರೆ ಎನ್ನುವ ಹೊತ್ತಿಗೆ ಇದೇ ಒಳ ಮೀಸಲಾತಿ ಒಳ ಸಂಚಿನ ಭೂತ ಬಂದು ಆಗೀನ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರಾಗಿದ್ದ ಪರಮೇಶ್ವರ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಇದು ದೊಡ್ಡಮಟ್ಟದ ವಿರೋಧಕ್ಕೂ ಕಾರಣವಾಗಿತ್ತು, ಪರಿಣಾಮ ಸರ್ಕಾರವೇ ಸ್ಪಷ್ಟೀಕರಣ ನೀಡುವಂತಾಯಿತು. ಒಳ ಮೀಸಲಾತಿಯ ಹೊಡೆಕ್ಕೆ ಕಾಂಗ್ರೆಸ್‌ನ ಹಲವು ಸಚಿವರು, ಶಾಸಕರು ಸೋಲಬೇಕಾಯಿತು, ವಿಶೇಷವಾಗಿ ಬಲಗೈ ಸಮುದಾಯ ಪ್ರಬಲವಾಗಿರುವ ಕಡೆಯೇ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಎಡಗೈ ಸಮುದಾಯಕ್ಕೆ ಸೇರಿದ ಲೋಕೊಪಯೋಗಿ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಆಂಜನೇಯ ಸೇರಿದಂತೆ ಒಳ ಮೀಸಲಾತಿ ಪರವಾಗಿ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದ ಜನಪ್ರತಿನಿಧಿಗಳು ೨೦೧೮ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರು. ವಿಚಿತ್ರವೆಂದರೆ ಒಳ ಮೀಸಲಾತಿ ವಿರೋಧಿಸುತ್ತಾ ಬಂದಿದ್ದ ನಾಯಕರು ಗೆದ್ದು ಇಂದು ಗದ್ದುಗೆ ಏರಿದ್ದಾರೆ.
ತುಮಕೂರು ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಸುಮಾರು ೨ ಲಕ್ಷದಷ್ಟು ಜನಸಂಖ್ಯೆ ಇರುವ ಬಲಗೈ ಸಮುದಾಯ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿಯೇ ಪೆಟ್ಟು ಕೊಟ್ಟಿತ್ತು. ಕೊರಟಗೆರೆ ಹೊರತು ಪಡಿಸಿ. ಮಧುಗಿರಿ, ಸಿರಾ, ತಿಟಪೂರು, ತುಮಕೂರು ನಗರ ಕ್ಷೇತ್ರದಲ್ಲಿ ಬಹುತೇಕ ಬಲಗೈ ಸಮುದಾಯ ಬಿಜೆಪಿ ಕಡೆ ಒಲವು ತೋರಿದ್ದು ಅಲ್ಲಗಳೆಯಲಾಗದ ಸತ್ಯ. ೨೦೧೩ರಲ್ಲಿ ಪರಮೇಶ್ವರ್ ವಿರುದ್ಧ ನಡೆದಿತ್ತು ಎನ್ನಲಾದ ಚುನಾವಣಾ ಒಳ ಸಂಚಿಗೆ ಪ್ರತಿ ಸಂಚು ೨೦೧೮ರ ಚುನಾವಣೆಯಲ್ಲಿ ಸ್ಪಷ್ಟವಾಗಿ ಕೆಲಸ ಮಾಡಿತ್ತು. ಇದೀಗ ಒಳ ಮೀಸಲಾತಿ ಅಸ್ತ್ರಕ್ಕೆ ಪ್ರತಿ ಅಸ್ತ್ರವೆಂಬಂತೆ ಡಿಸಿಎಂ ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಶಿಕ್ಷಣ ಸಚಿವ ಬಿಎಸ್‌ಪಿಯ ಎನ್.ಮಹೇಶ್, ಸಂಸದ ಧೃವ ನಾರಾಯಾಣ ಸೇರಿದಂತೆ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಿಂದ ಶಾಸಕ ಸಭೆಗೆ ಆಯ್ಕೆಯಾಗಿರುವ ಛಲವಾದಿ ಸಮುದಾಯದ ಎಲ್ಲ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸುವ ಮೂಲಕ ಛಲವಾದಿ ಸಮುದಾಯ ಬಲ ಪ್ರದರ್ಶನದ ಜೊತೆಗೆ ನಮ್ಮ ಸಮುದಾಯವನ್ನು ಕಡೆಗಣಿಸಿದರೆ ಪರಿಣಾಮ ಎದುರಿಸಬೇಕಾದಿತು ಎನ್ನುವ ಎಚ್ಚರಿಕೆ ನೀಡಲು ಹೊರಟಂತ್ತಿದೆ.
ರಾಜ್ಯದ ಪರಿಶಿಷ್ಟ ಜಾತಿ ಮೀಸಲು ವಿಧಾನ ಸಭಾ ಕ್ಷೇತ್ರಗಳಲ್ಲಿ ಪೈಕಿ ೧೬ ಕ್ಷೇತ್ರಗಳಲ್ಲಿ ಮೂರು ಪಕ್ಷಗಳಿಂದ ಛಲವಾದಿ ಸಮುದಾಯದ ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದೆಯೂ ಪರಮೇಶ್ವರ್ ಅನೇಕ ಬಾರಿ ನಾನು ಒಳ ಮೀಸಲಾತಿ ಜಾರಿಗೆ ವಿರುದ್ಧವಾಗಿಲ್ಲ ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಲೇ ಬಂದಿದ್ದರು. ಆದರೆ ಇಂದಿನ ಕಾರ್ಯಕ್ರಮ ಒಳ ಮೀಸಲಾತಿ ಜಾರಿಗೆ ಮುಂದಾಗದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡುವ ವೇದಿಕೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತ್ತಿಲ್ಲ.
ಮಂಕಾಗುತ್ತ ಒಳ ಮೀಸಲಾತಿ ಧ್ವನಿ : ಸದ್ಯದ ರಾಜಕೀಯ ಬೆಳವಣಿಗೆ ಹಾಗೂ ಛಲವಾದಿಗಳ ಒಗ್ಗಟ್ಟಿನ ತಂತ್ರ ನೋಡಿದರೆ ಒಳ ಮೀಸಲಾತಿ ಜಾರಿ ಸದ್ಯಕ್ಕೆ ದೂರ ಎನ್ನುವುದು ಸ್ಪಷ್ಟವಾಗುತ್ತೆ. ರಾಜ್ಯ ಸರ್ಕಾರದ ಮಟ್ಟದಲ್ಲಿ ಏನೇ ಚರ್ಚೆ ನಡೆದರೂ ಅದು ಪರಮೇಶ್ವರ್ ಉಪಸ್ಥಿತಿಯಲ್ಲೇ ನಡೆಯಬೇಕು, ಇನ್ನು ಕೇಂದ್ರ ಸರ್ಕಾರದ ಮಟ್ಟಕ್ಕೆ ತಲುಪಿದರೂ ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಇರಲೇಬೇಕು. ಅಯಾಕಟ್ಟಿನ ರಾಜಕೀಯ ಹಾಗೂ ಆಡಳಿತಶಾಹಿಯಲ್ಲಿ ಛಲವಾದಿ ಸಮುದಾಯ ಮುಂಚೂಣಿಯಲ್ಲಿ ಇರುವುದರಿಂದ ಒಳ ಮೀಸಲಾತಿ ಜಾರಿ ಅಷ್ಟು ಸುಲಭವಲ್ಲ.
ದಲಿತ ಸಿಎಂ, ದಲಿತ ಸಚಿವ ಹೋರಾಟಗಳು ಇದೀಗ ಅಪ್ರಸ್ತುತವಾಗುತ್ತಿದ್ದು, ಎಡಗೈ ಸಿಎಂ, ಬಲಗೈ ಸಿಎಂ, ಸಚಿವಸ್ಥಾನದ ಬೇಡಿಕೆಯ ಧ್ವನಿ ತುಸು ಹೆಚ್ಚಾಗುವ ಸಾಧ್ಯತೆಯಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದಲಿತ ಓಟ್ ಬ್ಯಾಂಕ್ ಚದುರಿದರೆ ಅದರಿಂದ ನಷ್ಟ ಕಾಂಗ್ರೆಸ್‌ಗೆ. ಅತ್ತ ಧರಿ ಇತ್ತ ಪುಲಿ ಯಾವುದನ್ನು ಅಪ್ಪಿಕೊಳ್ಳಬೇಕು, ಯಾವುದನ್ನು ಒಪ್ಪಿಕೊಳ್ಳಬೇಕು ಎನ್ನುವ ಗೊಂದಲದ ಸ್ಥಿತಿಯಲ್ಲಿದೆ ಕಾಂಗ್ರೆಸ್ ಪಕ್ಷ. ಇದು ಹದ್ದು ಮೀರಿದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಎರಡಕ್ಕಿ ದಾಟದು ಎನ್ನುವುದು ರಾಜಕೀಯ ಪಂಡಿತರ ಹಂಬೋಣ.
ಛಲವಾದಿ ಅಭಿವೃದ್ಧಿ ನಿಗಮ ರಚನೆ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ  ಛಲವಾದಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುವಂತೆ ಸಮಾರಂಭದಲ್ಲಿ ಹಕ್ಕೋ ತ್ತಾಯ ಮಂಡನೆಯಾಗಲಿದೆ.

No comments:

Post a Comment

vishalaprabha 09-02-2019 pages